ನನ್ನ ಮಗನಿಗೊಂದು ಲೈಫು ಕೊಡಿ!

Parent and child hands handing flowers

ನನ್ನ ಮಗನನ್ನು ಲಾಂಚ್ ಮಾಡ್ತಾ ಇದ್ದೀನಿ. ನಾಡಿದ್ದು ಬೆಳಗ್ಗೆ ಮುಹೂರ್ತ ಸಮಾರಂಭ. ತುಂಬ ದೊಡ್ಡ ಸಿನಿಮಾ ಮಾಡ್ತಿದ್ದೇವೆ. ಇದಕ್ಕೋಸ್ಕರ ಒಬ್ಬರು ದೊಡ್ಡ ನಿರ್ದೇಶಕರನ್ನು ಗೊತ್ತು ಮಾಡಿದ್ದೀನಿ. ಅವರೇ ಅವನ ಸಿನಿಮಾದ ಮೊದಲ ದೃಶ್ಯ ಡೈರೆಕ್ಟ್ ಮಾಡ್ತಾರೆ. ಒಂಚೂರು ಪಬ್ಲಿಸಿಟಿ ಬೇಕಲ್ಲ…
ಹಾಗಂತ ಸಿನಿಮಾ ಪತ್ರಕರ್ತರಿಗೆ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಹಿರಿಯ ನಿರ್ದೇಶಕರು, ಮಾಜಿ ನಟರು, ಮಾಜಿ ರಾಜಕಾರಣಿಗಳು, ಪ್ರಸಿದ್ದ ಸ್ಟಾರುಗಳು, ಸೋತ ನಿರ್ಮಾಪಕರು, ರಿಯಲ್ ಎಸ್ಟೇಟು ನಂಬಿಕೊಂಡ ಮಣ್ಣಿನ ಮಕ್ಕಳು, ಔಟರ್ ರಿಂಗ್ ರಸ್ತೆಯ ಆಸುಪಾಸಲ್ಲಿ ಎಕರೆಗಟ್ಟಲೆ ಜಾಗ ಹೊಂದಿರುವ ರಿಂಗ್ ರೋಡ್ ಸಾಹೇಬರುಗಳು- ಎಲ್ಲರೂ ತಮ್ಮ ತಮ್ಮ ಪುತ್ರರನ್ನು ಆಗೀಗ ಲಾಂಚ್ ಮಾಡುತ್ತಲೇ ಇರುತ್ತಾರೆ.
ಇತ್ತೀಚಿನ ವರುಷಗಳಲ್ಲಂತೂ ಮಕ್ಕಳನ್ನು ಲಾಂಚ್ ಮಾಡುವುದು ಒಂದು ಮಹೋನ್ನತ ಕಾರ್ಯಕ್ರಮ. ಹಿರಿಯ ನಟರೊಬ್ಬರ ಮಗನನ್ನು ಲಾಂಚ್ ಮಾಡುವುದಕ್ಕೆ ಒಂದು ಕೋಟಿ ಖರ್ಚು ಮಾಡಿದರೆಂದು ಸುದ್ದಿಯಾಯಿತು. ಮಾಜಿ ನಟರೊಬ್ಬರು ತಮ್ಮ ಮಗನನ್ನು ಚಿತ್ರರಂಗಕ್ಕೆ ತರುವುದಕ್ಕೆಂದೇ ಐದು ಕೋಟಿ ಖರ್ಚು ಮಾಡಿ ಕಳಕೊಂಡರಂತೆ. ಒಂದು ಕಾಲದ ಯಶಸ್ವಿ ನಿರ್ದೇಶಕರೊಬ್ಬರು ತನ್ನ ಮಗನನ್ನು ಲಾಂಚ್ ಮಾಡುತ್ತಲೇ ಇರುತ್ತಾರೆ. ಮೂರೋ ನಾಲ್ಕೋ ಸಿನಿಮಾಗಳನ್ನು ಮಾಡಿ ಆರೆಂಟು ಕೋಟಿ ಕಳಕೊಂಡಿದ್ದಾರೆ ಎಂಬುದು ಸುದ್ದಿ.
ಈ ಕುರಿತು ಮಾತಾಡುತ್ತಿದ್ದಾಗ ಮಿತ್ರರೊಬ್ಬರು ಈ ಲಾಂಚಿಂಗ್ ಪ್ಯಾಡುಗಳ ಬಗ್ಗೆ ಬೇಸರ ಮಾಡಿಕೊಂಡರು. ಅವರ ಪ್ರಕಾರ ನಟನೆ ಅನ್ನುವುದು ವಂಶಪಾರಂಪರ್ಯವಾಗಿ ಬರುವ ಆಸ್ತಿಯಲ್ಲ. ಅರಸೊತ್ತಿಗೆಯೂ ಅಲ್ಲ. ನಟನೆ ಒಂದು ಕಲೆ. ಹೀಗಾಗಿ ಕಲಾವಿದನಾಗುವುದು ಆಯ್ಕೆಗಿಂತ ಹೆಚ್ಚಾಗಿ ಆಕಸ್ಮಿಕ ಮತ್ತು ವರ. ಎಲ್ಲರೂ ನಟರಾಗಲಾರರು. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಮಕ್ಕಳನ್ನು ಡಾಕ್ಟರ್ ಓದಿಸಬಹುದು ಆದರೆ ಯಶಸ್ವಿ ಡಾಕ್ಟರನ್ನಾಗಿ ಮಾಡಲಾಗದು. ಹಾಗೇ ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿ ಮಕ್ಕಳನ್ನು ಹೀರೋ ಮಾಡಬಹುದು. ನಟನನ್ನಾಗಿ ಮಾಡುವುದು ಕಷ್ಟ. ಎಷ್ಚೇ ಸೋಪು ಹಾಕಿ ತೊಳೆದರೂ ಕೊಳೆ ಹೋಗುತ್ತದೆಯೇ ಹೊರತು, ಕಳೆ ಹೋಗುತ್ತದೆಯೇ?
ನಮ್ಮ ಚಿತ್ರರಂಗದ ಗೋಳು ಕಣ್ರಿ ಇದು. ಮಕ್ಕಳನ್ನು ಲಾಂಚ್ ಮಾಡ್ತೀವಿ ಅಂತ ಹೊರಡೋದು. ಜಗತ್ತಿನಲ್ಲಿ ಎಲ್ಲೂ ಇಂಥದ್ದೊಂದು ಸಂಪ್ರದಾಯ ಇಲ್ಲ. ಈ ಸಿನಿಮಾ ಅನ್ನೋದು ಭಾರತೀಯರದ್ದು ಅಲ್ಲವೇ ಅಲ್ಲ. ಅದು ಹಾಲಿವುಡ್ಡಿಂದ
ಬಂದದ್ದು. ಹಾಲಿವುಡ್ಡಿನ ಅದ್ಭುತವಾದ ನಟರು, ನಿರ್ದೇಶಕರು, ನಿರ್ಮಾಪಕರು ತಮ್ಮ ಮಕ್ಕಳನ್ನು ಲಾಂಚ್ ಮಾಡಿದ ಪ್ರಸಂಗ ಎಂದಾದ್ರೂ ಕೇಳಿದ್ದೀರಾ.? ರಾಬರ್ಟ್ ಡಿ ನಿರೋ ಆಗಲೀ, ಮರ್ಲನ್ ಬ್ರಾಂಡೋ ಆಗಲಿ, ಬ್ರಾಡ್ ಪಿಟ್ಟ್ ಆಗಲೀ, ಸ್ಪೀಲ್‌ಬರ್ಗ್ ಆಗಲಿ ತಮ್ಮ ಮಕ್ಕಳಿಗೆಂದು ಸಿನಿಮಾ ಮಾಡಿದ್ದಾರಾ.? ಕೊಲಂಬಿಯಾ ಪಿಕ್ಟರ್ಸ್ ಮಾಲೀಕ ತನ್ನ ಮಗನಿಗೆಂದು ಒಂದು ಸಿನಿಮಾ ತೆಗೆದಿದ್ದಾನಾ.? ಜಾಕಿ ಚಾನ್ ಮಗ ಸಂಗೀತ ನಿರ್ದೇಶಕ. ಆದರೆ ಅಪ್ಪನ ಹೆಸರು ಹೇಳಿಕೊಂಡು ಅವನು ಗೆಲ್ಲುವುದಕ್ಕೆ ನೋಡಲಿಲ್ಲ. ಬ್ರೂಸ್ ಲೀ ಮಗ ಮರಿ ಬ್ರೂಸ್ ಲೀ ಅಂತ ಹೆಸರಿಟ್ಟುಕೊಂಡು ಯಾಕೆ ಸಿನಿಮಾ ಮಾಡಲಿಲ್ಲ. ನಮ್ಮಲ್ಲಿ ಟೈಗರ್ ಪ್ರಭಾಕರ್ ಮಗ ಟೈಸನ್ ಅಂತಿಟ್ಟುಕೊಂಡು ಹೊರಟ ಹಾಗೆ ಅವನೂ ಯಾಕೆ ನಟನಾಗಲು ಹಂಬಲಿಸಲಿಲ್ಲ.? ಯಾಕೆಂದರೆ ಅವರ ಪಾಲಿಗೆ ಸಿನಿಮಾ ಅನ್ನೋದು ಕಲೆ. ಪ್ರತಿಯೊಂದು ಸಿನಿಮಾವನ್ನೂ ಅವರು ಶ್ರದ್ಧೆ, ಪ್ರೀತಿ ಮತ್ತು ಶಿಸ್ತಿನಿಂದ ಮಾಡುತ್ತಾರೆ. ಒಂದು ಕತೆಯನ್ನು ಯಾರೋ ಸೂಚಿಸುತ್ತಾರೆ, ಮತ್ಯಾರೋ ಅದರ ಚಿತ್ರಕತೆ ಬರೀತಾರೆ, ಅದನ್ನಿಟ್ಟುಕೊಂಡು ಮತ್ಯಾರೋ ಪಾತ್ರವರ್ಗದ ಆಯ್ಕೆ ಮಾಡುತ್ತಾರೆ. ಹೀಗೆ ಎಲ್ಲವೂ ಪ್ರೊಫೆಶನಲ್ ಆಗಿ ನಡೆಯುತ್ತಿರುತ್ತದೆ. ನನ್ನ ಮಗನನ್ನೇ ಹೀರೋ ಮಾಡಿ ಅಂತ ಯಾರೂ ಅಲ್ಲಿ ಕೇಳುವುದಕ್ಕೆ ಹೋಗುವುದಿಲ್ಲ. ಮಗನಿಗೊಂದು ಚಾನ್ಸ್ ಕೊಡಿ ಅಂತ ಯಾರಾದರೂ ಕೇಳಿದರೆ ಆತನನ್ನು ಅನುಮಾನದಿಂದ ನೋಡುತ್ತಾರೆ. ಈ ಖಾಯಿಲೆ ನಮ್ಮಲ್ಲೇ ಜಾಸ್ತಿ. ಸಿನಿಮಾ ಕೂಡ ವಂಶಪಾರಂಪರ್ಯ ಎಂದು ನಂಬಿದವರು ಇಲ್ಲಿದ್ದಾರೆ. ಅಪ್ಪ ನಟ, ಮಗನೂ ನಟ, ಮೊಮ್ಮಗನೂ ನಟ, ಇಡೀ ವಂಶವೇ ಕಲಾವಿದರ ವಂಶ. ನಟನೆ ಗೊತ್ತಿದೆಯೋ ಇಲ್ಲವೋ ಅವನು ಸ್ಟಾರು, ಮೂರು ಕಾಸು ಹುಟ್ಟದೇ ಇದ್ದರೂ, ಮೂರೇ ದಿನಕ್ಕೆ ಕಲೆಕ್ಷನ್ನು ಬಿದ್ದು ಹೋದರೂ ಅವನು ಸೂಪರ್ ಸ್ಟಾರು. ಅದಕ್ಕೂ ಅಭಿನಯಕ್ಕೂ, ಕಲೆಗೂ ಸಂಬಂಧವೇ ಇಲ್ಲ. ಅದೊಂದು ಪಟ್ಟ.
ಇದನ್ನೆಲ್ಲ ನೋಡಿ ಬೇಸತ್ತಿದ್ದ ಅವರು ಮತ್ತೂ ಮುಂದುವರಿದು ಹೇಳಿದರು: ಇಂಥ ನಟನ ಇಪ್ಪತ್ತೈದನೇ ಸಿನಿಮಾ, ಐವತ್ತನೇ ಸಿನಿಮಾ, ನೂರನೇ ಸಿನಿಮಾ ಅನ್ನೋದು ಕೂಡ ದಕ್ಷಿಣ ಭಾರತೀಯ ಚಿತ್ರರಂಗದ್ದೇ ಗೋಳು. ತೆಲುಗಿನ ಮಂದಿ ಅದನ್ನು ಆಡಂಬರದಿಂದ ಮಾಡುತ್ತಾರೆ, ಕನ್ನಡ ಚಿತ್ರರಂಗಕ್ಕೆ ಮಾದರಿ ಆಗಬೇಕಾಗಿದ್ದು ಮಲಯಾಳಂ ಚಿತ್ರರಂಗ. ಆದರೆ ದುರದೃಷ್ಟವಶಾತ್ ಅದು ತೆಲುಗು ಚಿತ್ರರಂಗವನ್ನು ಅನುಕರಿಸುತ್ತಿದೆ. ಮೂಗು ಸವರುತ್ತಾ, ಬೆರಳೆತ್ತುತ್ತಾ, ಕಾಲು ತೋರಿಸಿಕೊಂಡು, ಸ್ಟಿಲ್ಲುಗಳಂತೆ ಓಡಾಡುವವರೆಲ್ಲ ಇಲ್ಲಿ ಮಹಾನ್ ಕಲಾವಿದರು. ಇಲ್ಲಿಯ ಬಹುತೇಕ ಸ್ಟಾರುಗಳು ಸಹಜವಾಗಿ ಹುಟ್ಟಿ ಬೆಳೆದು ಬಂದವರಂತೆ ಕಾಣಿಸೋದಿಲ್ಲ. ನೇರವಾಗಿ ತೆಲುಗು ಸಿನಿಮಾದ ಸ್ಕ್ರೀನಿನಿಂದ ಹೊರಗೆ ಬಿದ್ದವರಂತೆ ಭಾಸವಾಗುತ್ತಾರೆ ಅಂತ ಅವರು ಕೊಂಚ ದುಃಖದಿಂದಲೇ ಹೇಳಿದರು.
ನಮ್ಮ ಮಹಾನ್ ನಟರಿಗೆ ಅಂಥ ದುಃಖವೇನೂ ಇದ್ದಂತಿಲ್ಲ. ಅವರು ರೀಮೇಕು ಮಾಡುತ್ತಾ ಸುಖವಾಗಿರಬಲ್ಲರು. ಬೇಕಿದ್ದರೆ ರೀಮೇಕ್ ಮಾಡುವುದು ಕೂಡ ಕಲೆ ಎಂದು ಸಮರ್ಥಿಸಿಕೊಳ್ಳಬಲ್ಲರು.

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear