ನಿರ್ದೇಶಕನ ಉದ್ದೇಶ ಕತೆಗಾರನನ್ನು ತೃಪ್ತಿಪಡಿಸುವುದಲ್ಲ

ನಾನು ಮೊಟ್ಟ ಮೊದಲು ನೋಡಿದ ಸಿನಿಮಾ ರಾಜ್ ಕುಮಾರ್ ಅಭಿನಯದ ಮಯೂರ. ಆ ಸಿನಿಮಾ ನೋಡುವ ಮೊದಲೇ ನಾನು ದೇವುಡು ಬರೆದ ಮಯೂರ ಕಾದಂಬರಿಯನ್ನು ಹತ್ತಾರು ಬಾರಿ ಓದಿದ್ದೆ. ಅದೇ ಮೊದಲ ಬಾರಿಗೆ ನೋಡುತ್ತಿದ್ದಂತೆ ನಾನು ಓದಿದ ದೃಶ್ಯಗಳೇ ತೆರೆಯ ಮೇಲೆ ಒಂದರ ಹಿಂದೊಂದರಂತೆ ಬರುತ್ತಿದ್ದವು. ಕಾದಂಬರಿಯಲ್ಲಿ ಸ್ಥಿರವಾಗಿದ್ದ ಪಾತ್ರಗಳು ಇದ್ದಕ್ಕಿದ್ದಂತೆ ಚಲನಶೀಲವಾದವು. ಕಾದಂಬರಿ ಓದುತ್ತಿದ್ದಾಗ ನಾನು ಗ್ರಹಿಸುತ್ತಿದ್ದದ್ದು, ತೆರೆಯ ಮೇಲೆ ನಿಜವಾಗುತ್ತಾ ನಡೆದಿತ್ತು. ಜಟ್ಟಿಗಳ ನಡುವೆ ಕುಸ್ತಿ ಆಡುವ ಬ್ರಾಹ್ಮಣರ ಹುಡುಗ, ಅರಸುಮಕ್ಕಳ ಕುದುರೆ ಸವಾರಿ ತರಬೇತಿಯನ್ನು ಮರದ ಮೇಲೆ ಕುಳಿತು ಕದ್ದು ನೋಡುತ್ತಿರುವ ಮಯೂರ ಶರ್ಮ, ಅವನ ಜುಟ್ಟು ಜನಿವಾರಗಳೆಲ್ಲ ನಾನು ಹೇಗೆ ಕಲ್ಪಿಸಿಕೊಂಡಿದ್ದೆನೋ ಹಾಗೆಯೇ ಇತ್ತು. ಚಿತ್ರ ಮುಂದುವರಿಯುತ್ತಾ ಹೋದ ಹಾಗೆ, ಆ ವಯಸ್ಸಿನಲ್ಲಿ ನನಗೆ ಪರಿಚಿತವಲ್ಲದ ಪ್ರಣಯದ ಸನ್ನಿವೇಶಗಳನ್ನು ಬಿಟ್ಟರೆ ಮಿಕ್ಕದ್ದೆಲ್ಲ ಕಾದಂಬರಿ ಓದುವಾಗಲೇ ನನ್ನೊಳಗೆ ಸಿನಿಮಾದಂತೆಯೇ ಕಂಡುಬಿಟ್ಟಿತ್ತು. ಕೋಟೆಯ ಮೇಲಿಂದ ಹಾರುವ ಮಯೂರ ಶರ್ಮ, ನಮ್ಮೂರಿನ ಗಡಾಯಿ ಕಲ್ಲಿನ ಮೇಲಿಂದ ಜಿಗಿದಿದ್ದ. ನಾನು ನೋಡಿದ ಮೈಸೂರು ಅರಮನೆಯಲ್ಲೇ ಆ ಕತೆಯನ್ನು ನಾನೂ ಕಲ್ಪಿಸಿಕೊಂಡಿದ್ದೆ.
ಅದಾಗಿ ಎಷ್ಟೋ ವರ್ಷಗಳ ನಂತರ ಚಿತ್ರಕಥಾ ಶಿಬಿರವೊಂದರಲ್ಲಿ ಮಾತಾಡುವುದಕ್ಕೆಂದು ದೇವುಡು ಅವರ ಕಾದಂಬರಿಯನ್ನೂ ಮಯೂರ ಸಿನಿಮಾವನ್ನೂ ಮತ್ತೊಮ್ಮೆ ನೋಡಿದೆ. ಮಯೂರ ಚಿತ್ರಕ್ಕೆ ಸಂಭಾಷಣೆ ಬರೆದವರು ಚಿ. ಉದಯಶಂಕರ್ ಅನ್ನುವುದು ನೆನಪಿತ್ತು. ಅದರ ಚಿತ್ರಕತೆ ಬರೆದವರು ಯಾರೆಂಬುದು ಮಾತ್ರ ಮನಸ್ಸಿನಲ್ಲಿ ದಾಖಲಾಗಿರಲೇ ಇಲ್ಲ. ಚಿತ್ರಕತೆಗೂ ಕಾದಂಬರಿಗೂ ತುಂಬ ಹತ್ತಿರದ ಸಂಬಂಧ ಇದ್ದುದರಿಂದ, ಯಾರು ಚಿತ್ರಕತೆಯ ಹೊಣೆ ಹೊತ್ತಿರಬಹುದು ಎಂದು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ದೇವುಡು ನರಸಿಂಹ ಶಾಸ್ತ್ರಿ ಅವರ ಕತೆ, ಚಿ. ಉದಯಶಂಕರ್ ಅವರ ಸಂಭಾಷಣೆ ಮತ್ತು ಸಾಹಿತ್ಯ, ವಿಜಯ್ ಅವರ ನಿರ್ದೇಶನ ಎಂಬ ಹೆಸರುಗಳಷ್ಟೇ ಕಂಡವು.
ಮಯೂರ ಎಂಬ ಯಶಸ್ವಿ ಚಿತ್ರಕ್ಕೆ ಚಿತ್ರಕತೆಗಾರನೇ ಇಲ್ಲ. ದೇವುಡು ನರಸಿಂಹಶಾಸ್ತ್ರಿಗಳು ಬರೆದ ಕಾದಂಬರಿಯನ್ನು ಇಟ್ಟುಕೊಂಡು ಸಿನಿಮಾ ನೋಡುತ್ತಿದ್ದರೆ ಆ ಕಾದಂಬರಿಯೇ ಚಿತ್ರಕತೆ ಇದ್ದಂತೆ ಇದೆ ಅನ್ನುವುದು ಗೊತ್ತಾಗುತ್ತದೆ. ಅಂದರೆ ಕನ್ನಡದಲ್ಲಿ ಕಾದಂಬರಿ ಬರೆಯುತ್ತಿದ್ದವರು ಚಿತ್ರಕತೆ ಬರೆಯುವಷ್ಟೇ ಅಚ್ಚುಕಟ್ಟಾಗಿ ದೃಶ್ಯಗಳನ್ನು ಕಟ್ಟುತ್ತಿದ್ದರು. ಪ್ರತಿಯೊಂದು ದೃಶ್ಯವನ್ನೂ ಕಲ್ಪಿಸಿಕೊಂಡು ಇಡೀ ಕಾದಂಬರಿಯನ್ನು ತಮ್ಮೊಳಗೇ ಗ್ರಹಿಸಿಕೊಂಡು ಸಮಗ್ರವಾದ ಚಿತ್ರಣವನ್ನು ಕಣ್ಣಮುಂದಿಟ್ಟುಕೊಂಡೇ ಕಾದಂಬರಿ ಬರೆಯುತ್ತಿದ್ದರು.
ನೀವು ಮಯೂರ ಕಾದಂಬರಿಯನ್ನು ಒಮ್ಮೆ ಓದಿ ನೋಡಿ. ಅಲ್ಲಿ ಕಿತ್ತು ಹಾಕಬಹುದಾದ ಸನ್ನಿವೇಶವೇ ಇಲ್ಲ. ಪ್ರತಿಯೊಂದು ಸನ್ನಿವೇಶವೂ ಕಥಾ ನಾಯಕನನ್ನು ಪೋಷಿಸುವುದಕ್ಕೆಂದೇ ಸೃಷ್ಟಿಯಾಗಿದೆ. ಮಯೂರ ಶರ್ಮನೆಂಬ ಹೆಸರಲ್ಲಿ ಬ್ರಾಹ್ಮಣ ಕುಮಾರನಂತೆ ಇದ್ದ ಮಯೂರ ವರ್ಮ, ಕದಂಬರ ವಂಶದ ಕುಡಿ ಅನ್ನುವುದು ಕ್ರಮೇಣ ಗೊತ್ತಾಗುತ್ತಾ ಹೋಗುತ್ತದೆ. ಆತ ಪಲ್ಲವರ ವಿರುದ್ಧ ಹೋರಾಡುವುದು, ಪ್ರಜೆಗಳನ್ನು ತನ್ನವರನ್ನಾಗಿ ಮಾಡಿಕೊಳ್ಳುವುದು, ತನ್ನ ಉಪಾಯಗಳಿಂದ ಶೌರ್ಯದಿಂದ ಗೆಲ್ಲುತ್ತಾ ಹೋಗುವುದು, ಕೊನೆಯಲ್ಲಿ ಕ್ಷಮೆಗಿಂತ ದೊಡ್ಡ ಶೌರ್ಯವಿಲ್ಲ ಎಂಬುದನ್ನು ಪಲ್ಲವರನ್ನು ಕ್ಷಮಿಸುವ ಮೂಲಕ ನಿರೂಪಿಸುವುದು- ಎಲ್ಲವೂ ಕಾದಂಬರಿಕಾರನ ಕಲ್ಪನೆಯೇ. ಇಡೀ ಚಿತ್ರದ ಆಶಯ, ಮೌಲ್ಯ, ನಾಡಪ್ರೇಮ, ಕನ್ನಡತನ, ಭಾಷಾಭಿಮಾನ- ಎಲ್ಲವೂ ಕಾದಂಬರಿಯೊಳಗೇ ಇತ್ತು. ಅದನ್ನು ಮೂಲಕ್ಕೆ ಎಷ್ಟು ಹತ್ತಿರ ತರುವುದಕ್ಕೆ ಸಾಧ್ಯವೋ ಅಷ್ಟು ಹತ್ತಿರ ಬರುವಂತೆ ಚಿತ್ರೀಕರಿಸುವುದು ಮಾತ್ರ ನಿರ್ದೇಶಕನಿಗಿದ್ದ ಕೆಲಸ. ಕಾದಂಬರಿಯಿಂದ ಎತ್ತಿಕೊಂಡ ಅನೇಕ ಸಂಭಾಷಣೆಗಳನ್ನೂ ವಿವರಗಳನ್ನು ಚಿತ್ರಕ್ಕೆ ಅಳವಡಿಸಲು ಬೇಕಾದ ಮಾತುಗಳನ್ನೂ ಚಿ. ಉದಯಶಂಕರ್ ಬರೆದಿದ್ದರು. ಹಾಗೆಯೇ, ಎಲ್ಲೆಲ್ಲಿ ಹಾಡುಗಳು ಬರುತ್ತವೋ ಅಲ್ಲಿ, ಕಾದಂಬರಿಯ ಆಶಯಕ್ಕೆ ಧಕ್ಕೆ ಬರದಂಥ ಗೀತೆಗಳನ್ನೂ ಅವರು ರಚಿಸಿದ್ದರು. ಉದಾಹರಣೆಗೆ ಪ್ರಜೆಗಳಿಗೆ ಕಂಟಕಪ್ರಾಯನಾಗಿದ್ದ ಸೇನಾಪತಿಯನ್ನು ದಂಡಿಸಿ, ಪ್ರಜೆಗಳಿಗೆ ಭರವಸೆ ಕೊಡುವ ದೃಶ್ಯವನ್ನು ವೈಭವೀಕರಿಸಲು ಬರೆದ ‘ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ’ ಹಾಡು, ಪ್ರಣಯ ಸನ್ನಿವೇಶದಲ್ಲಿ ಬರುವ ‘ಈ ಮೌನವಾ ತಾಳೆನು’ ಮುಂತಾದ ಗೀತೆಗಳನ್ನು ಮಾತ್ರ ಎಲ್ಲೆಲ್ಲಿ ಬರಬೇಕೆಂದು ಸೂಚಿಸಿದ್ದಷ್ಟೇ ನಿರ್ದೇಶಕನೋ ಸಂಭಾಷಣಾಕಾರನೋ ಮಾಡಿರುವ ಮಾರ್ಪಾಡು ಎಂಬುದು ಸ್ಪಷ್ಟವಾಗುತ್ತದೆ.
ಇದು ಯಾಕೆ ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ನಮಗೆ ಹೊಳೆಯುವುದು ಇದು: ಸಿನಿಮಾಗಳ ಉದ್ದೇಶ ರಂಜನೀಯವಾಗಿ ಕತೆ ಹೇಳುವುದು ಮಾತ್ರವೇ ಆಗಿತ್ತು. ನಿರ್ದೇಶಕ ಅದರಾಚೆಗೆ ಏನನ್ನೂ ಸೂಚಿಸಲು ಬಯಸುತ್ತಿರಲಿಲ್ಲ. ಒಂದು ಕತೆಯನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದಿಡುವುದಕ್ಕೆ ಏನು ಬೇಕೋ ಅದು ಕಾದಂಬರಿಯ ಒಳಗೇ ಸಿಕ್ಕರೆ ಮಿಕ್ಕಿದ್ದೇನನ್ನೂ ಹುಡುಕುತ್ತಾ ಕೂರುವುದು ಬೇಕಿಲ್ಲ ಎಂದೇ ನಿರ್ದೇಶಕ ನಂಬಿದ್ದ ಎಂದು ಕಾಣುತ್ತದೆ.
ಮಯೂರ ಬಿಡುಗಡೆ ಆದದ್ದು 1975ರಲ್ಲಿ. ಆ ಕಾಲಕ್ಕೆ ದೇವುಡು ನರಸಿಂಹ ಶಾಸ್ತ್ರಿ ಅವರು ಜನಪ್ರಿಯ ಕಾದಂಬರಿಕಾರರು. ಮಯೂರ ಕಾದಂಬರಿಯನ್ನಂತೂ ಲಕ್ಷಾಂತರ ಮಂದಿ ಓದಿದ್ದರು. ಆ ಕಾರಣಕ್ಕೆ ನಿರ್ದೇಶಕರು ಆ ಕಾದಂಬರಿಯ ಸನ್ನಿವೇಶಗಳನ್ನು ಬದಲಾಯಿಸುವ ಧೈರ್ಯ ಮಾಡಲಿಲ್ಲವೆಂದು ಭಾವಿಸಬಹುದು.
ಹಾಗೆಯೇ, ಎಂ ವಿ ಕೃಷ್ಣಸ್ವಾಮಿಯವರು ಎ ಎನ್ ಮೂರ್ತಿರಾಯರ ಆಷಾಢಭೂತಿ ನಾಟಕವನ್ನು ಸುಬ್ಬಾಶಾಸ್ತ್ರಿ ಹೆಸರಲ್ಲಿ ಸಿನಿಮಾ ಮಾಡಿದ್ದರು. ಅದೊಂದು ಅಪೂರ್ವ ಚಿತ್ರವಾಗಿ ಮೂಡಿ ಬಂದಿತ್ತು ಕೂಡ. ವೀಣೆ ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಳೀಕೃಷ್ಣ, ಶ್ರೀರಂಗ ಗೋಪಾಲರತ್ನಂ ಮುಂತಾದ ದಿಗ್ಗಜರ ಸಂಗಮ ಇದ್ದ ಆ ಚಿತ್ರದ ಚಿತ್ರಕತೆ ಎ ಎನ್ ಮೂರ್ತಿರಾಯರ ಹೆಸರಲ್ಲೇ ಇದೆ.ಅವರ ಹೆಸರಿನ ಕೆಳಗೆ ಎಂ ವಿ ಕೃಷ್ಣಸ್ವಾಮಿಯವರ ಹೆಸರಿದೆ. ಮೂರ್ತಿರಾಯರು ಆ ಚಿತ್ರಕ್ಕೆ ಬೇರೆಯೇ ಆದ ಚಿತ್ರಕತೆಯನ್ನೇನೂ ಬರೆದುಕೊಟ್ಟಿರಲಿಲ್ಲ. ನಾಟಕದ ದೃಶ್ಯಗಳೇ ಚಿತ್ರಕತೆಯಂತೆ ಇದ್ದವು.
ಇವತ್ತು ಮಯೂರ ಕತೆಯನ್ನೋ ಆಷಾಢಭೂತಿ ನಾಟಕವನ್ನೋ ಕೈಗೆತ್ತಿಕೊಳ್ಳುವ ನಿರ್ದೇಶಕ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾನೆ ಎಂದು ನನಗೆ ಅನ್ನಿಸುವುದಿಲ್ಲ. ಇವತ್ತು ಬರೆಯುತ್ತಿರುವ ಕತೆಗಾರರೂ ಕಾದಂಬರಿಕಾರರೂ ಸಿನಿಮಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾದಂಬರಿ, ಕತೆ ಬರೆಯುತ್ತಿಲ್ಲವೆಂದೇ ಹೇಳಬಹುದು. ಉದಾಹರಣೆಗೆ ಯಾರಾದರೂ ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟರೆ, ಚಿತ್ರಕತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಪೌರಾಣಿಕ ಮತ್ತು ಐತಿಹಾಸಿಕ ಕಾದಂಬರಿಗಳ ಜಗತ್ತೇ ಹಾಗಿತ್ತೆಂದು ಹೇಳಬಹುದು. 2015ರಲ್ಲಿ ಬಿಡುಗಡೆಯಾದ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಚಿತ್ರಕತೆಯನ್ನೇ ಗಮನಿಸಿ. ಅದೊಂದು ಚಂದಮಾಮಾ ಕತೆಗಿಂತ ಭಿನ್ನವಾಗಿಲ್ಲ. ಅರವತ್ತರ ದಶಕಗಳಲ್ಲಿ ಬರುತ್ತಿದ್ದ ಚಂದಮಾಮ ಕತೆಗಳಲ್ಲಿ ಮಂಜು ಮುಸುಕಿದ ಬೆಟ್ಟದ ಮೇಲೊಂದು ಅರಮನೆ ಇರುತ್ತಿತ್ತು. ಬೆಟ್ಟದ ಕೆಳಗೆ ಬುಡಕಟ್ಟು ಮಂದಿ ವಾಸಿಸುತ್ತಿದ್ದರು. ಒಂದು ದಿನ ಬೆಟ್ಟದ ಮೇಲಿನಿಂದ ಬಂಗಾರದ ಕೂದಲೊಂದು ತೇಲಿಕೊಂಡು ಬಂದು, ಬುಡಕಟ್ಟು ಜನಾಂಗದ ತರುಣನ ಕೈಗೆ ಸಿಗುತ್ತದೆ. ಆತ ಬೆಟ್ಟದ ಮೇಲೆ ಸುಂದರಿ ಇದ್ದಾಳೆಂದು ಭಾವಿಸಿ, ಯಾರೂ ಎಂದೂ ಏರದ ಬೆಟ್ಟವನ್ನೇರಿ ಹೋಗುತ್ತಾನೆ…. ಹೀಗೆ ಕತೆ ಮುಂದುವರಿಯುತ್ತದೆ. ಈ ಇಡೀ ಕತೆಯನ್ನು ತಾಂತ್ರಿಕ ವೈಭವ, ಪರಿಸರದ ಸೊಬಗು, ವೀರಾವೇಶದ ಮಾತು, ಸಾಹಸಮಯ ಸನ್ನಿವೇಶಗಳ ಮೂಲಕವೇ ಕಟ್ಟುತ್ತಾ ಹೋಗಬೇಕೇ ವಿನಃ, ಬೇರೆ ರೀತಿಯ ಸಾಧ್ಯತೆಗಳನ್ನು ಇಲ್ಲಿ ಊಹಿಸಲೂ ಸಾಧ್ಯವಿಲ್ಲ. ಆ ಒಂದು ಸಿನಿಮಾ ಪ್ರಕಾರಕ್ಕೆ ಇರುವ ಸಾಧ್ಯತೆ ಮತ್ತು ಮಿತಿ ಅದು.
ಅದೇ ಸಾಮಾಜಿಕ ಕತೆಗಳ ಮಾತು ಬಂದಾಗ ಎಲ್ಲವೂ ಬೇರೆಯೇ ಆಗುತ್ತದೆ. ಸರಳ ಸಾಮಾಜಿಕ ಕತೆಯೊಂದು ತನ್ನ ಕಾಲದ ಸಾಮಾಜಿಕ ನಡವಳಿಕೆ, ಆ ನೆಲದ ಕಾನೂನು, ಆ ಕಾಲದ ಭಾವತೀವ್ರತೆ, ಅಲ್ಲಿಯ ಭಾಷೆ, ಅಲ್ಲಿಯ ಆಚಾರ ವಿಚಾರಗಳನ್ನು ಇಟ್ಟುಕೊಂಡೇ ಕತೆ ಹೇಳಬೇಕಾಗುತ್ತದೆ.
ಅದನ್ನು ಕಟ್ಟುವುದಕ್ಕೆ ಕತೆಗಾರನಷ್ಟೇ ನುರಿತ ಚಿತ್ರಕತೆಗಾರನೂ ಬೇಕಾಗುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ 1974ರಲ್ಲಿ ಬಿಡುಗಡೆಯಾದ ಬೂತಯ್ಯನ ಮಗ ಅಯ್ಯು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನೀಳ್ಗತೆಯೊಂದನ್ನು ಸಿದ್ಧಲಿಂಗಯ್ಯ ಅವರೇ ಸಿನಿಮಾಕ್ಕೆ ಅಳವಡಿಸಿದ್ದರು. ಚಿತ್ರಕತೆಯನ್ನೂ ಅವರೇ ಬರೆದಿದ್ದರು.
ಗೊರೂರು ರಾಮಸ್ವಾಮಿ ಅಯ್ಯಂಗಾರರ ಕತೆಯಲ್ಲಿ ಲೋಕನಾಥ್ ಅವರ ಬಹುಪ್ರಸಿದ್ಧ ಉಪ್ಪಿನಕಾಯಿ ಪ್ರಸಂಗ ಕ್ವಚಿತ್ತಾಗಿ ಬಂದು ಹೋಗಿತ್ತು. ಸಿದ್ಧಲಿಂಗಯ್ಯ ಅದನ್ನು ಸಾಕಷ್ಟು ವಿಸ್ತಾರ ಮಾಡಿದ್ದರು. ಮೂವರು ಒಂದೇ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶ ಇರಲೇ ಇಲ್ಲ. ಅದನ್ನು ಸೇರಿಸಿದ್ದರು. ಕಾದಂಬರಿಯ ಆಶಯವನ್ನಷ್ಟೇ ಇಟ್ಟುಕೊಂಡು ಸಿದ್ಧಲಿಂಗಯ್ಯ ಬರೆದ ಚಿತ್ರಕತೆಯ ಕುರಿತು ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ ಅಂಥ ತೃಪ್ತಿಯೇನೂ ಇರಲಿಲ್ಲ.
ಆದರೆ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿತು. ಕತೆಗಾರನನ್ನು ತೃಪ್ತಿಪಡಿಸುವುದು ಚಿತ್ರಕತೆಗಾರನ ಉದ್ದೇಶವೂ ಅಲ್ಲ, ನಿರ್ದೇಶಕನ ಧ್ಯೇಯವೂ ಅಲ್ಲ ಅನ್ನುವುದು ಎರಡನೇ ಸಲ ಸಾಬೀತಾಯಿತು.
ಅದು ಮೊದಲನೇ ಸಲ ಸಾಬೀತಾದದ್ದು ತರಾಸು ಅವರ ಮೂರು ಕಾದಂಬರಿಗಳನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ಅವರು ನಿರ್ಮಿಸಿದ ನಾಗರಹಾವು ಚಿತ್ರದಲ್ಲಿ. ಅದನ್ನು ಕೇರೆ ಹಾವು ಅಂತ ಕಾದಂಬರಿಕಾರ ತ.ರಾ.ಸುಬ್ಬರಾವ್ ಕರೆದಿದ್ದರೂ ಕೂಡ, ಸಿನಿಮಾ ದಾಖಲಾರ್ಹ ಗಳಿಕೆಯೊಂದಿಗೆ ಇವತ್ತಿಗೂ ನೆನಪಲ್ಲಿ ಉಳಿಯುವ ಸಿನಿಮಾ ಆಗಿಬಿಟ್ಟಿತು.

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear