ನಿರ್ದೇಶಕ ಎಂಬ ಬಡ ರೈತ

ಚಿತ್ರರಂಗ ಮೂಲತಃ ನಿರ್ದೇಶಕರ ಕರ್ಮಭೂಮಿ. ಅಲ್ಲಿ ನಿರ್ಮಾಪಕ ಒಬ್ಬ ವ್ಯಾಪಾರಿ, ನಟ ಒಬ್ಬ ಸಂಚಾರಿ, ಪ್ರೇಕ್ಷಕ ಸಹಚಾರಿ. ಹೀಗಂದ ಮೇಲೆ ಹೊಸ ಆಲೋಚನೆಗಳೇನಾದರೂ ಹುಟ್ಟುವುದಿದ್ದರೆ ಅದು ನಿರ್ದೇಶಕನ ಮೂಲಕವೇ ಆಗಬೇಕು.
ಅವನು ರೈತನಿದ್ದ ಹಾಗೆ. ತನ್ನ ಮುಂದಿರುವ ಎಂಟೆಕರೆ ಹೊಲದಲ್ಲಿ ಟೊಮ್ಯಾಟೋ ಬೆಳೆಯಬೇಕೋ, ಕಲ್ಲಂಗಡಿಯೋ ಅಂತ ಅವನೇ ನಿರ್ಧಾರ ಮಾಡುವವನು. ಹಾಗೆ ನಿರ್ಧರಿಸುವ ಹೊತ್ತಿಗೆ ಅವನು ಮಣ್ಣಿನ ಗುಣ, ತನ್ನಲ್ಲಿರುವ ಬೀಜ, ನೀರಾವರಿ ವ್ಯವಸ್ಥೆ, ಮುಂಗಾರು ಮಳೆ- ಎಲ್ಲವನ್ನೂ ಲೆಕ್ಕ ಹಾಕಿರುತ್ತಾನೆ. ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಬೆಲೆ ಜಾಸ್ತಿ ಅನ್ನೋದನ್ನೂ ಅವನು ತಿಳಿದುಕೊಂಡಿರಬೇಕಾಗುತ್ತದೆ.
ಆದರೆ ಕೆಲವೊಮ್ಮೆ ರೈತ ತುಂಬ ತನ್ಮಯನಾಗಿ, ಪರಿಸರ ಪ್ರೇಮಿಯಾಗಿ, ಮಣ್ಣಿನ ಮಗನಾಗಿ ಕೆಲಸ ಮಾಡುತ್ತಾನೆ. ಯಾರೇನೇ ಹೇಳಿದರೂ ಕೇಳದೇ, ತನಗೆ ಹಾಗಲಕಾಯಿಯೇ ಇμ ಎಂದು ಹಾಗಲಕಾಯಿ ಬೆಳೆಯುತ್ತಾನೆ. ಅವನ ದುರದೃಷ್ಟಕ್ಕೆ ಆ ವರ್ಷ ಹಾಗಲಕಾಯಿ ಕೊಳ್ಳುವವರ ಸಂಖ್ಯೆ ಕ್ಷೀಣಿಸಿರುತ್ತದೆ. ನೀಲಂ ಮಾವಿನ ಹಣ್ಣು ಬೆಳೆದ ವರುಷ, ಆ ಊರಿನ ಬಹುತೇಕರಿಗೆ ಸಕ್ಕರೆ ಕಾಯಿಲೆ ಬಂದುಬಿಟ್ಟಿರುತ್ತದೆ. ಹೀಗಾಗಿ ಆತ ಎμ ಪ್ರೀತಿಯಿಂದ ಬೆಳೆದರೂ ಫಸಲಿಗೆ ತಕ್ಕ ಬೆಲೆ ಹುಟ್ಟದೇ ಹೋಗುತ್ತದೆ. ಅದು ಮಾರುಕಟ್ಟೆಗೆ ಸಂಬಂಧಪಟ್ಟದ್ದು.
ಚಿತ್ರರಂಗ ಎಂಬ ಮಾರುಕಟ್ಟೆಯಲ್ಲಿ ರೈತನಿಗೆ ಹೊಲವಿಲ್ಲ. ಆತ ಉತ್ತು, ಬಿತ್ತಿ, ಬೆಳೆಯುವುದು ನಿರ್ಮಾಪಕನ ಹೊಲದಲ್ಲಿ. ಮಾರುಕಟ್ಟೆಯಲ್ಲಿ ಲಾಭವಾದರೂ ನμವಾದರೂ ನಿರ್ಮಾಪಕನಿಗೇ. ಎಷ್ಟೋ ಸಲ ನಿರ್ಮಾಪಕ ತೆಂಗು ಬೆಳೆಯಪ್ಪಾ ಅಂದರೆ ನಿರ್ದೇಶಕ ಕಂಗು ಬೆಳೆಯುತ್ತಾನೆ. ನಿರ್ಮಾಪಕ ಮೆಂತ್ಯೆ ಬಿತ್ತು ಅಂದರೆ ನಿರ್ದೇಶಕ ಮುಸುಕಿನಜೋಳ ಬಿತ್ತುತ್ತಾನೆ. ದುರದೃಷ್ಟವಶಾತ್, ತಾನು ಹೇಳಿದ್ದೊಂದು, ಆತ ಬಿತ್ತಿ ಬೆಳೆಯುತ್ತಿರುವುದು ಮತ್ತೊಂದು ಎಂಬುದು ಹೊಲದ ಒಡೆಯನಿಗೆ ಗೊತ್ತಾಗುವುದು ಬೀಜ ಮೊಳಕೆ ಬಂದು, ಕುಡಿಯೊಡೆದು, ಗಿಡವಾದ ನಂತರವೇ. ಕೃಷಿ
ಏನೇನೂ ಗೊತ್ತಿಲ್ಲದವನಿಗೆ ಫಸಲು ಬಂದ ನಂತರವೇ ತಾನು ಹೇಳಿದ್ದೊಂದು ಇಲ್ಲಿ ಆದದ್ದೊಂದು ಅನ್ನೋದು ಅರ್ಥವಾಗುತ್ತದೆ. ಅಷ್ಟು ಹೊತ್ತಿಗೆ ಹಾಕಿದ ಬಂಡವಾಳ ವಾಪಸ್ಸು ಪಡೆಯಲು, ಬೆಳೆದ ಫಸಲನ್ನು ಬಂದ ಬೆಲೆಗೆ ಮಾರುವುದಕ್ಕೆ ಆತ ಮುಂದಾಗುತ್ತಾನೆ. ಒಳ್ಳೆಯ ಬೆಲೆ ಬರಲಿ ಅಂತ ಗೋಡೌನಿನಲ್ಲಿಟ್ಟರೆ ಹುಳಬೀಳುವ
ಭಯ, ಮುಕ್ಕಾಗುವ ಅಪಾಯ ಇರೋದರಿಂದ ಬೆಳೆಗಾರ ಯಾವುದೇ ರಿಸ್ಕು ತೆಗೆದುಕೊಳ್ಳಲು ಇಚ್ಚಿಸುವುದೂ ಇಲ್ಲ, ಅದು ಸಾಧ್ಯವೂ ಅಲ್ಲ.
ಹೀಗೆ ತನಗೆ ಯಾವ ಹತೋಟಿಯೂ ಇಲ್ಲದ ಒಂದು ವೃತ್ತಿಯನ್ನು ನಂಬಿಕೊಂಡ ಮಂದಿ ಧರಣಿ ಕೂತರೂ ಅಷ್ಟೇ, ಬೆರಣಿ ತಟ್ಟಿದರೂ ಅಷ್ಟೇ. ತನ್ನಿಚ್ಛೆಯಂತೆ ಬೆಳೆಯುವುದು ಹೊಲದ ಮಾಲಿಕನಿಗೆ ಸಾಧ್ಯವೇ ಇಲ್ಲ. ಹಾಗೇನಾದ್ರೂ ಸಾಧ್ಯ
ಆಗಬೇಕಿದ್ದರೆ ಆತನೇ ಹೊಲಕ್ಕಿಳಿಯಬೇಕು. ಇಲ್ಲಿ ಅನೇಕರಿಗೆ ಉಳುಮೆ ಗೊತ್ತಿಲ್ಲ. ಯಾವತ್ತೂ ಬೇಸಾಯ ಮಾಡಿದವರಲ್ಲ. ರಾಗಿಗೂ ಸಾಸಿವೆಯೂ ವ್ಯತ್ಯಾಸ ತಿಳಿಯದವರು ಕೃಷಿ ಮಾಡಲಾದೀತೇ? ಹೀಗಾಗಿ ಆತ ಒಳ್ಳೆಯ ಕೃಷಿಗಾರನನ್ನೇ ಹಿಡಿಯಬೇಕು. ರೈತ ಬುದ್ಧಿವಂತನಲ್ಲದೇ ಹೋದರೆ, ಆತನಿಗೆ ಕ್ಷೇತ್ರ-ಫಲ, ಬೀಜಬಲ
ಎರಡೂ ಅರ್ಥವಾಗುವುದು ಕಷ್ಟ.
ಆಗ ಈಗಿರುವಂಥ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಯಾರದೋ ಹೊಲ, ಯಾವುದೋ ಬೆಳೆ. ತಮಿಳುನಾಡಿನಲ್ಲಿ ಮೆಕ್ಕೆಜೋಳದ ಫಸಲು ಚೆನ್ನಾಗಿ ಬಂತು ಅಂತ ಗೊತ್ತಾದ ತಕ್ಷಣ ಇಲ್ಲೂ ಅದನ್ನೇ ಬೆಳೆಯುವ ಹುಮ್ಮಸ್ಸು. ಬೆಳೆ ಚೆನ್ನಾಗಿ ಬಂದು ಏನು ಉಪಯೋಗ? ಅರ್ಧ ಕರ್ನಾಟಕದಲ್ಲಿ ಮೆಕ್ಕೆಜೋಳ ತಿನ್ನುವವರೇ ಇಲ್ಲವಲ್ಲ! ಅದು
ಅರ್ಥವಾಗುವ ಹೊತ್ತಿಗೆ ತುಂಬ ತಡವಾಗಿ, ರೈತ ಪರಾರಿ, ಹೊಲದೊಡೆಯ ಭಿಕಾರಿ.
*
ರೈತನೇ ದೇಶದ ಬೆನ್ನೆಲುಬು ಎಂಬಂತೆ ನಿರ್ದೇಶಕನೆಂಬ ರೈತನೇ ಚಿತ್ರರಂಗದ ಬೆನ್ನೆಲುಬು. ಅವನಿಗೆ ಹೊಸ ಹೊಸ ಕೃಷಿ ವಿಧಾನಗಳು, ಮಾರುಕಟ್ಟೆ, ಮಣ್ಣಿನ ಗುಣ ಗೊತ್ತಿರಬೇಕಾಗುತ್ತದೆ. ಮೆಣಸಿಕಾಯಿ ತಿನ್ನುವವರು ಕಮ್ಮಿಯಾಗಿ, ಕ್ಯಾಪ್ಸಿಕಮ್ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ ಅನ್ನುವುದನ್ನು ಆತ ತಿಳಕೊಂಡಿರಬೇಕಾಗುತ್ತದೆ.
ಒಂದು ಕಾಲದಲ್ಲಿ ಅಂಥ ರೈತರು ಕನ್ನಡ ಚಿತ್ರರಂಗದಲ್ಲಿದ್ದರು. ಪುಟ್ಟಣ್ಣ ಕಣಗಾಲ್, ದೊರೆ-ಭಗವಾನ್, ಗೀತಪ್ರಿಯ, ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ಡಿ. ರಾಜೇಂದ್ರ ಬಾಬು, ಶೇμ ಗಿರಿರಾವ್, ವಿಜಯ್, ಶಿವಮಣಿ -ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರು ಮಾಡಿದ ಸಿನಿಮಾಗಳನ್ನೇ ನೋಡಿ. ಒಬ್ಬೊಬ್ಬರೂ ಎಷ್ಟೊಂದು ವೈವಿಧ್ಯಮಯ ಸಿನಿಮಾಗಳನ್ನು ಮಾಡಿದರು. ಹೀರೋಗಳ ಪ್ರಭಾವಳಿಯನ್ನು ಹೇಗೆ ಬದಲಾಯಿಸುತ್ತಾ ಬಂದರು. ರೆಬೆಲ್ ಸ್ಟಾರ್ ಅಂಬರೀಶ್ ಇದ್ದಕ್ಕಿದ್ದ ಹಾಗೆ ‘ಒಲವಿನ ಉಡುಗೊರೆ’ ಕೊಡಬಲ್ಲವರಾಗಿ, ಸಾಹಸಸಿಂಹ ‘ಕರುಣಾಮಯಿ’ಯಾಗಿ, ಟೈಗರ್ ಪ್ರಭಾಕರ್ ‘ಮಾತೃವಾತ್ಸಲ್ಯ’ಕ್ಕೆ ಸಾಕ್ಷಿಯಾಗಿ- ಬೆಳೆ ಬದಲಾಗುತ್ತಿತ್ತು, ಹವಾಮಾನಕ್ಕೆ ತಕ್ಕಂತೆ. ಆಗ ಬೆಳೆಯೂ ಚೆನ್ನಾಗಿತ್ತು, ಮಾರುಕಟ್ಟೆಯೂ ಚೆನ್ನಾಗಿರುತ್ತಿತ್ತು.
ಈಗ ಬೆಳೆ ಚೆನ್ನಾಗಿಲ್ಲದೇ ಹೋದರೂ ಪರವಾಗಿಲ್ಲ, ಮಾರುಕಟ್ಟೆ ಚೆನ್ನಾಗಿದ್ದರೆ ಸಾಕು ಎಂಬ ಅಭಿಪ್ರಾಯ ಹುಟ್ಟಿಕೊಂಡಿದೆ. ಹೀಗಾಗಿ ಆಯಾ ಮಾರುಕಟ್ಟೆಗೆ ತಕ್ಕ ಬೆಳೆ ಬೆಳೆಯುವ ಹೊಸ ಟ್ರೆಂಡು ಹುಟ್ಟಿಕೊಂಡಿದೆ. ಬೆಳೆದ ಮಾಲನ್ನು ಮೂರೇ ದಿನಕ್ಕೆ ಅಲ್ಲಲ್ಲಿ ಇಲ್ಲಲ್ಲಿ ಒಯ್ದು ಮಾರಿಬಿಡುವ ಆತುರ. ರುಚಿ ತಿಳಿಯುವ ಮುನ್ನವೇ ಮಾಲು
ಖರ್ಚಾಗಿಬಿಟ್ಟರೆ ಸಾಕೆಂಬ ಆಸೆ.
ಬಹುಶಃ ತುಂಬ ಕಾಲ ಉಳಿಯುವಂಥದ್ದೇನನ್ನೂ ಈಗ ಬೆಳೆಯಲಾಗುತ್ತದೆ ಅನ್ನುವಂತಿಲ್ಲ. ರೆಡಿಮೇಡ್ ಉಪ್ಪಿನಕಾಯಿ ಬಾಳಿಕೆ ಬರುವುದಿಲ್ಲ. ತುಂಬ ಕಷ್ಟಪಟ್ಟು ಶೇಖರಿಸಿಟ್ಟು ಹಂಚಲು ಯತ್ನಿಸಿದರೆ ಹುಳ ಬೀಳುತ್ತದೆ.
ಯಾಕೆಂದರೆ, ಬಳಸಿರುವ ಪದಾರ್ಥ ಕಳಪೆಯದ್ದಾಗಿರುತ್ತವೆ.

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear