ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 4

ಅಪ್ಪನಿಂದ ರಕ್ತಗತವಾಗಿ ಬಂದ ಈ ಸಿನೆಮಾ ನೋಡುವ ಅಭ್ಯಾಸ, ಮುಂದೆ ಸ್ವತಂತ್ರವಾಗಿ ಅವರ ನೆರಳಿನಾಚೆಗೆ ಹೊರ ಬಂದು ಸಿನೆಮಾ ನೋಡಲು ಕಾರಣವಾಗಲು ಕೂಡ ಅಪ್ಪನೇ ಕಾರಣ. ಅಪ್ಪ-ಅಮ್ಮನ ಜೊತೆಯಿಲ್ಲದೆ ಥಿಯೇಟರಿನಲ್ಲಿ ಸಿನೆಮಾ ನೋಡುವ ಅವಕಾಶ ಮಾಡಿಕೊಟ್ಟವರು ನಮ್ಮ ಅಪ್ಪ. ಅದು ಅವರು ಉದ್ಧೇಶಪೂರ್ವಕವಾಗಿ ಮಾಡಿದ್ದಲ್ಲವಾದರೂ, ಮುಂದೆ ಕೆಲವೇ ವರ್ಷಗಳಲ್ಲಿ, ಬೇರೆಯವರ ಜೊತೆಗೂಡಿ ಸಿನೆಮಾ ನೋಡಲು ಆರಂಭಿಸಿದವನು, ಎಂಟನೇ ತರಗತಿಯಲ್ಲಿದ್ದಾಗ ಸ್ಪೋರ್ಟ್ಸ್ ನೋಡುವ ನೆಪದಲ್ಲಿ ಮುಳಬಾಗಿಲಿನಲ್ಲಿ ‘ಬೇಬಿಸ್ ಡೇ ಔಟ್ ಹಾಗೂ ಸ್ಟ್ರೀಟ್ ಫೈಟರ್’(ತೆಲುಗು-ವಿಜಯಶಾಂತಿ ಮುಖ್ಯಪಾತ್ರ) ಎರಡು ಸಿನೆಮಾಗಳನ್ನು ಥಿಯೇಟರಿನಲ್ಲಿ ಒಂದೇ ದಿನದಲ್ಲಿ ನೋಡುವಷ್ಟು ಧೈರ್ಯ ಬಂದಿತ್ತು. ಇದಕ್ಕೆ ಕಾರಣ ಅಪ್ಪನ ಸಿನೆಮಾ ಮೋಹ. 1993ರ ಮಾರ್ಚ್ ತಿಂಗಳು, ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದೆ. ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆ ಬರೆಯಲು ಏನಿಗದಲೆಯಿಂದ ಚಿಂತಾಮಣಿಗೆ ಬರಬೇಕಿತ್ತು. ಚಿಂತಾಮಣಿಯ ಚಿನ್ಮಯ ವಿಧ್ಯಾಶಾಲೆಯಲ್ಲಿ ಪ್ರವೇಶ ಪರೀಕ್ಷೆ. ಬೆಳ್ಳಂಬೆಳಗೆ ಅಪ್ಪ ನನ್ನ ಚಿಂತಾಮಣಿಗೆ ಕರೆದುಕೊಂಡು ಬಂದು, ಮಸಾಲೆ ದೋಸೆ ಬಿಸಿ ಬಿಸಿ ಕಾಫಿ ಕೊಡಿಸಿ, ಚಿನ್ಮಯ ಸ್ಕೂಲಿಗೆ ಕರೆದುಕೊಂಡು ಬಂದು, ಪರೀಕ್ಷಾ ಕೊಠಡಿ ಹುಡುಕಿ, ನಾನು ಕುಳಿತುಕೊಳ್ಳುವ ಜಾಗ ತೋರಿಸಿ, ಚೆನ್ನಾಗಿ ಬರೆಯಲು ಒಂದಷ್ಟು ಧೈರ್ಯ ತುಂಬಿ ಹೊರ ಹೋದರು, ಹೊರ ಹೋದವರು ಕೂಡಲೆ ಒಳಬಂದು ನನ್ನ ಜೇಬಲ್ಲಿ ಐದು ರೂಪಾಯಿಯ ನೋಟನ್ನು ಇಟ್ಟು, ನಮ್ಮೊಂದಿಗೆ ಬಂದಿದ್ದ ಏನಿಗದಲೆಯ ನಾಗೇಶ ನನ್ನ ಸಹಪಾಠಿಯ ಜೊತೆಯಲ್ಲೇ ಇರಬೇಕು, ಎಲ್ಲೂ ಹೋಗಬಾರದು ಅಂತ ಹೇಳಿ ಹೊರಹೋದರು. ಆಗ ಸಮಯ ಸುಮಾರು 9.55. ಪಕ್ಕದ ಅಂಜನಿ ಥಿಯೇಟರಿನಲ್ಲಿ 10.30 ಗೆ ಮಾರ್ನಿಂಗ್ ಶೋ ಶುರುವಾಗುವ ಸಮಯ. ಒಂದು ಗಂಟೆಯ ಸುಮಾರಿಗೆ ನನ್ನ ಪರೀಕ್ಷೆ ಮುಗಿಸಿ ನಾಗೇಶನ ಜೊತೆ ಅಪ್ಪನಿಗಾಗಿ ಕಾಯುತ್ತಾ ನಿಂತಿದ್ದೆ. ನಾಗೇಶನ ಅಪ್ಪ ಸುಬ್ರಮಣಿ, ನಿಮ್ ಅಪ್ಪ ಸಿನೆಮಾ ನೋಡೋದಿಕ್ಕೆ ಹೋಗಿದ್ದಾರೆ. ಸಿನೆಮಾ ಮುಗಿಯೋದು 1.30 ಕ್ಕೆ ಎಂದು ತಿಳಿಸಿದರು. ನಾಗೇಶ ತಾನೂ ಸಿನೆಮಾ ನೋಡಲು ಹಠ ಮಾಡಿದ. ಸುಬ್ರಮಣಿಯವರು, ಇಲ್ಲೇ ಕಾಯೋ ಬದಲು ನಮ್ಮೊಂದಿಗೆ ಸಿನೆಮಾ ಥಿಯೇಟರಿಗೆ ಬಾ, ನಿಮ್ ಅಪ್ಪ ಹೊರಬಂದಾಗ ಅವರ ಜೊತೆ ಬರಬಹುದು ಎಂದು ನನ್ನನ್ನೂ ಅವರೊಂದಿಗೆ ಕರೆದೊಯ್ದರು. (ಮುಂದುವರೆಯುವುದು)

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear