ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 6

ಸಿನೆಮಾ ನೋಡುವ ಹುಚ್ಚು ಹೆಚ್ಚಾಗುವ ಅವಕಾಶಗಳು ಸಿಕ್ಕಿದ್ದು, ನಾವು ಏನಿಗದಲೆ ಇಂದ ಸ್ವಂತ ಊರಿಗೆ ಬಂದ ಮೇಲೆ. ನಮ್ಮೂರು ಕೋಲಾರ ಜಿಲ್ಲೆಯ ಗಡಿಭಾಗದಲ್ಲಿರುವ ನಂಗಲಿ, ಬಳಿ ಇರುವ ಎನ್.ವೆಂಕಟಾಪುರ ಎಂಬ ಕುಗ್ರಾಮ. ಸರಾಸರಿ 43 ಮನೆಗಳಷ್ಟೇ ಇರುವುದು. ನಮ್ಮ ಹಳ್ಳಿಯಿಂದ ಆಂಧ್ರದ ಗಡಿ ಬರೀ ಮೂರು ಕಿಲೋಮೀಟರಷ್ಟೇ. ನಮ್ಮ ಸಂಬಂಧಿಕರು ಆಂದ್ರದಲ್ಲೇ ಹೆಚ್ಚಾಗಿರುವುದು. ನೂರಾರು ವರ್ಶಗಳ ಹಿಂದೆ, ಕರ್ನಾಟಕ-ಆಂಧ್ರ ಎಂಬ ಗಡಿ ಗುರುತಿಸುವುದಕ್ಕೂ ಮೊದಲು ನಮ್ಮ ಪೂರ್ವಜರು ಈ ಹಳ್ಳಿಗೆ ಬಂದು ನೆಲೆಸಿದವರು. ನಮ್ಮೂರಿನ ಮೂಲ ನಿವಾಸಿಗಳು ವಿಜಯನಗರ ಸಾಮ್ರಾಜ್ಯದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದವರಂತೆ. ನಮ್ಮ ಅಪ್ಪ ಅಮ್ಮನದು ಇಬ್ಬರದೂ ಇದೇ ಊರು. ಇಲ್ಲಿ ಬಂದು ನೆಲೆಸಿದ ಮೇಲೆ ನನಗೆ ಗ್ರಾಮ ಸಂಸ್ಕೃತಿ, ರಾಜಕೀಯ ಎಲ್ಲವುಗಳ ಪರಿಚಯ ಆಗತೊಡಗಿತು. ಅದಕ್ಕಿಂತ ಹೆಚ್ಚಾಗಿ ಅಂದಿನ ಕಾಲದಲ್ಲಿ ಸಿನೆಮಾಗೆ ಸಂಬಂಧಿಸಿದ ವಿಷಯ ಇಂದಿಗೆ ನನಗೆ ಹೆಚ್ಚು ಆಸಕ್ತಿದಾಯಕವಾಗಿದೆ. ಅದೇನೆಂದರೆ ಸಿನೆಮಾ ನೋಡುವ ಪದ್ಧತಿ, ನಮ್ಮೂರು ಹಾಗೂ ಗಡಿಯ ಆಚೆ ಈಚೆ ಬಹುತೇಕ ಊರುಗಳಲ್ಲಿ 90ರ ದಶಕದಲ್ಲಿ ಈ ಕೇಬಲ್ ಚಾನೆಲ್ಗಳು, ಗ್ರಾಮಗಳ ರಾತ್ರಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೊದಲು, ಊರುಗಳಲ್ಲಿ, ಹರಿಕತೆ, ರಾಮಕೋಟಿ, ನಾಟಕ ಹಾಗೂ ರಿಕಾರ್ಡ್ ಡ್ಯಾನ್ಸ್ ಗಳಷ್ಟೇ ಪ್ರಾಮುಖ್ಯತೆ ಪಡೆದಿದ್ದ ಆಚರಣೆ, ಸಿನೆಮಾ ನೋಡುವುದು. ಹುಟ್ಟಿನಿಂದ ಸಾವಿನ ತನಕ ಊರಿನಲ್ಲಿ ಏನೇ ವಿಶೇಷ ಘಟಿಸಿದರೂ, ಯಾವುದೇ ಆಚರಣೆಯಾದರು, ಅಂದು ರಾತ್ರಿ ಸಿನೆಮಾ ವೀಕ್ಷಣೆಯ ಜಾಗರಣೆ ಕಡ್ಡಾಯವಾಗಿ ನಡೆಯಲೇ ಬೇಕಿತ್ತು. ಊರಿನಲ್ಲಿ ಏನಾದರು ವಿಶೇಷವಾದದ್ದು ಘಟಿಸಿದರೆ, ಅಥವಾ ಆಚರಣೆ ಇದ್ದರೆ, ನಾನು ಹಾಗೂ ನನ್ನ ಕೆಲವು ಸ್ನೇಹಿತರು ಒಟ್ಟಾಗಿ ಮಾತನಾಡಿಕೊಂಡು ನಮ್ಮೂರಿಗೆ ಸಂಪರ್ಕಿಸುವ ಎರಡು ದಾರಿಗಳ ಆಜುಬಾಜಲ್ಲೇ ಹಸುಗಳನ್ನು ಮೇಯಿಸಲು ಹೋಗಲು ಪ್ಲಾನ್ ಮಾಡುತ್ತಿದ್ದೆವು. ಅಲ್ಲೇ ಯಾಕೆಂದರೆ, ಆ ಮೈ ಪುಳಕಿಸುವ, ನಮ್ಮ ಆ ದಿನದ ರಾತ್ರಿಯನ್ನು ಮಾಯಾಲೋಕದ ಚಿತ್ರಗಳ ಮೂಲಕ ನಮ್ಮನ್ನು ರಂಜಿಸಲು ಬರುವ ಚರ್ಮದ ಮೈ ಹೊದಿಕೆಯ ಆ ಪೆಟ್ಟಿಗೆಯನ್ನು ಊರೊಳಗೆ ಹೊತ್ತೊಯ್ಯುವುದನ್ನು ಕಣ್ಣಾರೆ ನೋಡಿ ಮನದಟ್ಟು ಮಾಡಿಕೊಳ್ಳುವುದಕ್ಕೆ. ಆ ಪೆಟ್ಟಿಗೆ ಮತ್ತೇನೂ ಅಲ್ಲಾ. ‘ವಿಸಿಪಿ’ Video Cassette Player.
(ಮುಂದುವರೆಯುವುದು)

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear