ವೇರ್ ಡು ವಿ ಗೋ ನೌ?

2018ರಲ್ಲಿ ಬಿಡುಗಡೆಯಾಗಿ ಹೆಚ್ಚು ಚರ್ಚೆಗೆ ಒಳಗಾದ Capernaum ಸಿನೆಮಾದ ನಿರ್ದೇಶಕಿ ಲೆಬನಾನಿನ ‘ನದಿನೆ ಲಬಾಕಿ’ ಯವರು ನಟಿಸಿ ನಿರ್ದೇಶಿಸಿದ ಸಿನೆಮಾ ವೇರ್ ಡು ವಿ ಗೋ ನೌ. ಈ ಸಿನೆಮಾ ತನ್ನ ಕಥೆಯಿಂದಲೇ ಹೆಚ್ಚು ಇಷ್ಟವಾಗುತ್ತದೆ. ಈ ಕಥೆ ನಡೆಯುವುದು ಲೆಬನಾನಿ ಒಂದು ಅನಾಮದೇಯ ಪುಟ್ಟ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸಲ್ಮಾನರು ಮತ್ತು ಕ್ರಿಷ್ಚಿಯನ್ನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿರುತ್ತಾರೆ. ಹಾಗಂತ ಇದು ಪರಿಪೂರ್ಣವಾಗಿ ಮಾದರಿ ಗ್ರಾಮವೂ ಅಲ್ಲ. ಆ ಹಳ್ಳಿ ಮತ್ತು ದೇಶದಲ್ಲಿ ನಡೆಯುವ ಕೋಮು ಗಲಭೆಗಳ ಪ್ರಭಾವದಿಂದ ಈ ಎರಡೂ ಧರ್ಮಗಳ ನಡುವೆ ಕಲಹವುಂಟಾಗಿ ಬಹಳಷ್ಟು ಗಂಡಸರು ಸಾವನ್ನಪ್ಪಿರುತ್ತಾರೆ. ಇಂತಹ ಸಾವು ನೋವನ್ನು ಕಣ್ಣಾರೆ ಕಂಡಿದ್ದ ಹಿರಿಯ-ಕಿರಿಯ ಮಹಿಳೆಯರು ಸಾಧ್ಯವದಷ್ಟೂ ಮತ್ತೆಂದೂ ಅಂತಹ ಕಲಹಗಳು ಅವರಲ್ಲಿ ಬರದಂತೆ ತಡೆಯುವ ಪ್ರಯತ್ನಗಳೇ ಚಿತ್ರದ ಕಥಾವಸ್ತು. ಆ ಹಳ್ಳಿಯ ಮತ್ತೊಂದು ವಿಶೇಷತೆಯೆಂದರೆ ಅಲ್ಲಿಗೆ ಬರುವುದಕ್ಕೆ ಅಥವ ಹೊರಗೆ ಹೋಗುವುದಕ್ಕೆ ಇರುವುದು ಒಂದೇ ಕಿರಿದಾದ ಮಣ್ಣಿನ ಸೇತುವೆ. ಸುತ್ತಲೂ ಆಳವಾದ ಕಂದಕ ಜೊತೆಗೆ ಎಲ್ಲೆಂದರಲ್ಲಿ ಹುದುಗಿಸಿರುವ ನೆಲಬಾಂಬುಗಳಿಂದಾಗಿ ಇರುವ ಒಂದೇ ಸೇತುವೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ಆ ಊರಿಗೆ ಹೊರಪ್ರಪಂಚದೊಂದಿಗೆ ಯಾವುದೇ ಸಂವಹನಾ ಮಾಧ್ಯಮ ಇರುವುದಿಲ್ಲ. ಇರುವ ಒಂದೇ ಮಾರ್ಗ ನಸ್ಸೀಮ್ ಮತ್ತು ರುಕ್ಕೋಜ್ ಎಂಬಿಬ್ಬರು ಯುವಕರು ಪ್ರತಿದಿನ ಹತ್ತಿರದ ನಗರಕ್ಕೆ ಹೋಗಿ ಆ ಹಳ್ಳಿಯವರಿಗೆ ಬೇಕಾದ ವಸ್ತುಗಳು, ದಿನಸಿಯ ಜೊತೆಗೆ ತರುವ ದಿನಪತ್ರಿಕೆ ಮತ್ತು ಸುದ್ದಿಯ ಮೂಲಕ ಮಾತ್ರ. ಆದರೆ ಹೊರಗಿನ ಜಗತ್ತಿನಲ್ಲಿ ನಡೆಯುತ್ತಿರುವ ಗಲಭೆಗಳನ್ನು ಸದಾ ಗಮನಿಸುತ್ತಿರುವ ಮಹಿಳೆಯರು ಆ ವಿಷಯವು ಗಂಡಸರ ಕಿವಿಗೆ ಬೀಳದಂತೆ ಸರ್ವಪ್ರಯತ್ನಗಳೂ ಮಾಡುತ್ತಿರುತ್ತಾರೆ. ರುಕ್ಕೋಜ್ ಟಿವಿ, ರೇಡಿಯೋ ರಿಪೇರಿ ಮಾಡಿ ಕೆಲಸ ಮಾಡುವಂತೆ ಮಾಡಿದರೆ ರಾತ್ರೋ ರಾತ್ರಿ ವಯಸ್ಸಾದ, ಹರೆಯದ ಹೆಂಗಸರೆಲ್ಲ ಸೇರಿ ಅದನ್ನು ಒಡೆದು ಹಾಕಿ ಹಾಳು ಮಾಡುತ್ತಾರೆ. ದಿನಪತ್ರಿಕೆ ಬರುವ ನಸುಕಿನ ವೇಳೆಗೆ ಎದ್ದು ಅದು ಮತ್ತೊಬ್ಬರ ಕೈಗೆ ಸಿಗದಂತೆ ಸುಟ್ಟು ಹಾಕುತ್ತಾರೆ. ಗಂಡಸರ ಮನಸ್ಸು ಗಲಭೆಯೆಡೆಗೆ ವಾಲದಂತೆ ತಡೆಯಲು ತಾವೇ ಹಣ ಒಟ್ಟುಮಾಡಿ ನಗರದಿಂದ ಬ್ಯಾಲೆ ಹುಡುಗಿಯರನ್ನು ಕರೆತಂದು ಹಳ್ಳಿಯಲ್ಲಿ ಕೆಲಕಾಲ ಇರುವಂತೆ ಮಾಡುತ್ತಾರೆ. ಕೊನೆಗೆ ತಮ್ಮ ಪ್ರಯತ್ನಗಳೆಲ್ಲ ವಿಫಲವಾಗುವಂತೆ ನಗರಕ್ಕೆ ಹೋಗಿದ್ದ ನಾಸಿರ್ ಆಕಸ್ಮಿಕವಾಗಿ ಗುಂಡೇಟು ತಿಂದು ಮೃತನಾದಾಗ, ಈ ಸುದ್ದಿಯನ್ನು ಸಾಧ್ಯವಾದಷ್ಟು ಗೌಪ್ಯವಾಗಿಡಲು ನಾಸಿರ್‌ನ ತಾಯಿ ಮತ್ತು ಸೋದರಿ ಪ್ರಯತ್ನಿಸಿದರು ನಾಸಿರ್‌ನ ಅಣ್ಣನಿಗೆ ತಿಳಿದುಬಿಡುತ್ತದೆ. ತನ್ನ ಮಗ ಮತ್ತೆಲ್ಲಿ ಹಳ್ಳಿಯಲ್ಲಿ ಎಲ್ಲರಿಗೂ ತಿಳಿಸಿ ಗಲಭೆ ಉಂಟುಮಾಡುತ್ತಾನೋ ಎಂದು ಆತಂಕಗೊಳ್ಳುವ ತಾಯಿ ಸ್ವಂತ ಮಗನ ಕಾಲಿಗೆ ಬಂದೂಕಿನಿಂದ ಸುಟ್ಟು ಮನೆಯೊಳಗೆ ಕೂಡಿ ಹಾಕುತ್ತಾಳೆ. ಚಿತ್ರದ ಕೊನೆಗೆ ಕೋಮು ಗಲಭೆಗಳಿಗೆ ಶಾಶ್ವತ ಪರಿಹಾರ ಹುಡುಕಲು ಮಹಿಳೆಯರೆಲ್ಲಾ ಸೇರಿ ದಿಟ್ಟವಾದ ನಿರ್ಧಾರ ತಳೆದು ಪರಸ್ಪರ ಧರ್ಮವನ್ನೇ ಬದಲಾಯಿಸಿಕೊಳ್ಳುತ್ತಾರೆ, ಏಸುವನ್ನು ಪೂಜಿಸುವ ತಾಯಿ ನಮಾಜ್ ಮಾಡುತ್ತಾಳೆ, ನಮಾಜ್ ಮಾಡಬೇಕಾದ ಪತ್ನಿ, ಮೇರಿಯ ಮುಂದೆ ಮೊಂಬತ್ತಿ ಬೆಳಗುತ್ತಾಳೆ. ಜಗತ್ತಿನಾದ್ಯಂತ ಕಾಡುತ್ತಿರುವ ಈ ಕೋಮು, ಗಲಭೆಗಳು ಪರಸ್ಪರ ಸ್ನೇಹ, ಸಾಮರಸ್ಯಗಳನ್ನು ಕದಡಿ ಶಾಶ್ವತ ಶತ್ರುಗಳನ್ನು ಮಾಡುವುದಲ್ಲದೆ, ಅಪಾರ ಜೀವಹಾನಿಗೆ ಕಾರಣವಾಗುತ್ತಿರುವ ಸಂದರ್ಭದಲ್ಲಿ ಈ ಸಿನೆಮಾ, ಪರಿಹಾರ ತೋರಿಸುವ ಅಪಾರ ಭರವಸೆ ಹುಟ್ಟುಹಾಕುವ ಸಣ್ಣ ಆಶಾಕಿರಣದಂತೆ ಗೋಚರವಾಗುತ್ತದೆ. (ಅಂತರ್ಜಾಲದ ‘ಪಂಜು’ ಪತ್ರಿಕೆಗಾಗಿ ಬರೆದಿದ್ದ ಲೇಖನ.)

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear