ಸೆನ್ಸ್ ಸಾರ್

ಒಂದು ತಯಾರಾದ ಸಿನಿಮಾ ತೆರೆಗೆ ಬರುವ ಮೊದಲು ಅದನ್ನು ಸೆನ್ಸಾರ್ ಮಾಡಿಸಿಕೊಂಡು ಅವರು ಕೊಟ್ಟ ಹಣೆಪಟ್ಟಿ ಯಾನ್ನು ಕಟ್ಟಿಕೊಂಡು ಬರುವುದು ಒಂದು ವಾಡಿಕೆಯಾಗಿದೆ.ಆದರೆ ಅಲ್ಲಿ ಸರ್ಟಿಫಿಕೇಟ್ ಕೊಡಲು ಸಿನಿಮಾ ನೋಡಲು ಕೂರುವ ಮಂದಿಗೆ ಲವಶೇಷವವೂ ಸಿನಿಮಾ ತಯಾರು ಮಾಡುವವರ ಸೃಜನಶೀಲತೆಯ ಬಗ್ಗೆ ಅರಿವಿರುವುದಿಲ್ಲ.ಎಲ್ಲಾ ಸೆನ್ಸಾರ್ ಮಂಡಳಿಯ ತಂಡದಲ್ಲಿ ಇದಿರುವುದಿಲ್ಲವಾದರೂ ಬಹುತೇಕ ತಂಡಗಳ ಸದಸ್ಯರು ಹೀಗೆಯೇ ಇರುತ್ತಾರೆ.ಕಾಲಕ್ಕೆ ತಕ್ಕಂತೆ ಇವರು ಅಥವಾ ನಿಯಮಗಳು ಬದಲಾಗಬೇಕಲ್ವೆ.ಅದೆಷ್ಟೋ ಸಲ ಸ್ಥಳೀಯ ಸೆನ್ಸಾರ್ ಕೊಟ್ಟ ಕಟ್ಗಳು ಅಥವಾ ಸರ್ಟಿಫಿಕೇಟ್ ಗಳು ಮೇಲಿನ ಹಂತಕ್ಕೆ ಅಪೀಲು ಹೋದಾಗ ಬದಲಾದದ್ದಿದೆ ಕೂಡ.ಸೆನ್ಸಾರ್ ಮಾಡುವಾಗ ಸೆನ್ಸ್ ಇರಲಿ ಸಾರ್ ಅನ್ನೋದು ನನ್ನ ಖುದ್ದು ಅನುಭವದ ವಾದ.ನನ್ನ ಮೊದಲ ಸಿನಿಮಾವನ್ನು ಸೆನ್ಸಾರ್ ಮಾಡಿಸುವಾಗ ನನಗಾದ ಟಾರ್ಚರ್ ಅಷ್ಟಿಷ್ಟಲ್ಲ.ನಾನು ಅದನ್ನು ಎದುರಿಸಲು ಸಿದ್ಧನಿದ್ದರೂ ನಮ್ಮ ಸಿನಿಮಾ ತಂಡದ ಯಾವೊಬ್ಬ ಸದಸ್ಯರೂ ಸಹ ನನ್ನೊಂದಿಗೆ ನಿಲ್ಲಲಿಲ್ಲ.ಅದರ ಪರಿಣಾಮ ಜೀವವಿಲ್ಲದ ಬರಿ ಬೊಂಬೆಯನ್ನು ಪ್ರೇಕ್ಷಕರು ನೋಡುವಂತಾಯಿತು.ಇದರ ಹೊರತಾಗಿಯೂ ಸಿನಿಮಾಗೆ ಗೆಲುವು ಸಿಗಲು ಕಾರಣ ಸಿನಿಮಾದಲ್ಲಿ ಅಡಗಿದ್ದ ನೂತನ ಸನ್ನಿವೇಶಗಳು ಹಾಗು ನಮ್ಮ ತಂಡದ ಪರಿಶ್ರಮದ ಫಲವಾಗಿ ಮೂಡಿಬಂದ ಪ್ರೇಕ್ಷಕರ ಮನಮುಟ್ಟಿದ ಹಾಡುಗಳು.ಸೆನ್ಸಾರ್ ಮಂಡಳಿಯ ಅಸಂಬದ್ಧ ವಾದ ಕಟ್ ಗಳು ಎಷ್ಟರ ಮಟ್ಟಿಗಿರುತ್ತವೆಂದರೆ ಅವನ್ನು ಊಹಿಸಿಕೊಳ್ಳಲೂ ಅಸಾಧ್ಯ.ಸೆನ್ಸಾರ್ ಅನ್ನೊ ವಿಷಯ ಸಿನಿಮಾಗೆ ಸಂಬಂಧಿಸಿದಂತೆ ಬೇಕೇಬೇಕು.ಅದರಲ್ಲಿ ಎರಡು ಮಾತಿಲ್ಲ.ಆದರೆ ಅಲ್ಲಿನ ಸದಸ್ಯರನ್ನು ನೇಮಿಸುವ ವಿಷಯದಲ್ಲಿ ಕೊಂಚ ಮುತುವರ್ಜಿ ವಹಿಸಿ ಸಂಸ್ಕಾರವಿರುವ, ಸ್ವಲ್ಪವಾದರೂ ಕಲೆಯ ಬೆಲೆಯನ್ನು ಅರಿತಿರುವ, ಸೆನ್ಸ್ ಇರುವವರನ್ನು ಹುಡುಕಿ ತಂದು ಕೂರಿಸಿದರೆ ಇಂತಹ ತಪ್ಪುಗಳು ಸಂಪೂರ್ಣ ಪ್ರಮಾಣದಲ್ಲಿ ನಿಲ್ಲದಿದ್ದರೂ ಕಡಿಮೆಯಂತೂ ಆಗುತ್ತದೆ.ಕೆಟ್ಟ ಪಾತ್ರ ಕೆಟ್ಟದ್ದನ್ನೇ ಮಾಡುತ್ತದೆ ಅದು ಎಲ್ಲರಿಗೂ ತಿಳಿದಿರುವ ವಿಷಯ ಅದನ್ನು ಅತಿರೇಕವಾಗಿ ಚಿತ್ರಿಸಬಾರದೆಂಬುದು ನಿಯಮ ಅದನ್ನು ಒಪ್ಪೋಣ.ಅದುಬಿಟ್ಟು ಅಂತಹಾ ಸನ್ನಿವೇಶಗಳೇ ಇರಬಾರದು ಎಂಬೋರಿಗೆ ಏನು ಹೇಳೋದು.ಹಾಗೆಯೇ ಒಂದು ಹೆಣ್ಣನ್ನು ಅತಿ ತುಚ್ಛ ವಾಗೀ ತೋರಿಸಬಾರದು ಸರಿ.ಆದರೆ ಆಕೆಯ ಸೌಂದರ್ಯವನ್ನು ಪ್ರೇಕ್ಷಕರಿಗೆ ರುಚಿಸುವಂತೆ ತೋರಬಾರದು ಅನ್ನೋದರಲ್ಲಿ ನಿಜವಾಗಿಯೂ ಗೊಂದಲವಿದೆ.ಹಾಗೆ ಮಂಡಳಿಯಲ್ಲಿ ವಾದಿಸೋ ಮಂದಿಯ ನಿಜರೂಪವೇ ಆಚೆಗೆ ಬಂದಾಗ ಬೇರೆಯದೇ ಆಗಿರುತ್ತದೆ.ಈ ಪ್ರಾಣಿ ದಯಾ ಸಂಘದವರು ಮಾಂಸ ತಿನ್ನುವಂತೆ ಇವರ ನಿಯಮಗಳು.ಪದಬಳಕೆಯ ವಿಚಾರಕ್ಕೆ ಬಂದರೆ ಇವರ ವಾದವನ್ನು ಒಪ್ಪಿದರೆ ಹಂಸಲೇಖಾರ ಯಾವ ಡ್ಯುಯೆಟ್ ಹಾಡುಗಳೂ(ಸೀರೆ ಅಂಚನು ನೀಡಮ್ಮ ಸೆರಗು ಅಲ್ಲ ನೆರಿಗೇ ತುದಿಯೂ ಬೇಕಮ್ಮ) ಬರುತ್ತಿರಲಿಲ್ಲ ಅಷ್ಟರ ಮಟ್ಟಿಗಿದೆ.ಪಾಪ ನಂ ಬಾಸ್ ಹಾಡುಗಳನ್ನು ಕೂಲಂಕುಷವಾಗಿ ಇವರು ಕೆದಕಿಲ್ಲವಷ್ಟೆ.ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ಸೆನ್ಸಾರ್ ಅನ್ನೋದು ಬೇರೆಯ ಭಾಷೆಗಳಿಗೆ ಹೋಲಿಸಿದರೆ ತುಸು ಜಾಸ್ತಿಯೇ ಇದೆ.ಇದರ ವಿರುದ್ಧ ಇಲ್ಲಿ ಬಾಯಿ ಬಡಿದುಕೊಳ್ಳೋದು ನಿರ್ದೇಶಕ ಮತ್ತು ನಿರ್ಮಾಪಕ ಮಾತ್ರ.ಪಾಪ ಬಂಡವಾಳ ಹೂಡಿರುವ ನಿರ್ಮಾಪಕರು ಸಮಯ ಮತ್ತು ಹಣಕಾಸಿನ ದೃಷ್ಟಿಯಿಂದ ಕಾಂಪ್ರಮೈಸ್ ಆಗುವ ಸನ್ನಿವೇಶವೇ ಹೆಚ್ಚು.ಇನ್ನು ಹೊಸ ನಿರ್ದೇಶಕರ ಪಾಡು ಹೇಳತೀರದು.ಈ ಕಡೆ ಮೊದಲ ನಿರ್ದೇಶನದ ಚಿತ್ರ ಆಚೆ ಬರಬೇಕು ಹಾಗೆಯೇ ತನ್ನನ್ನು ನಂಬಿ ಕೋಟಿ ಬಂಡವಾಳ ಹಾಕಿರುವ ಅನ್ನದಾತರನ್ನು ಎದುರು ಹಾಕಿಕೊಳ್ಳಲಾಗದು.ಇಂತಹ ಸಂದರ್ಭದಲ್ಲಿ ಏನು ಮಾಡಲಿಕ್ಕಾಗದೆ ತನ್ನ ಪರಿಶ್ರಮದ ಮೇಲೆ ನಂಬಿಕೆಯಿಟ್ಟು ಸುಮ್ಮನಾಗುವವರೇ ಹೆಚ್ಚು.ಇನ್ನು ನಾನು ಕೇಳಿದೆ ಮಟ್ಟಿಗೆ ಬೇರೆ ಭಾಷೆಯಲ್ಲಿ ಹೊಸ ಸೆನ್ಸಾರ್ ಅಧಿಕಾರಿ ಕೊಂಚ ಕಿರಿ ಕಿರಿ ಮಾಡುತ್ತಿದ್ದಾರೆ ಎಂದು ಗೊತ್ತಾದೊಡನೆಯ ಆ ಚಿತ್ರರಂಗದ ಮುಂಚೂಣಿ ನಾಯಕರು ಹಲವಾರು ಮಂದಿ ಆ ಆಫಿಸರನ್ನು ಭೇಟಿ ಮಾಡಿ ವಿನಂತಿಯನ್ನೋ ಅಥವಾ ಬೇರೆ ಕೇಳುವ ರೀತೀಯಲ್ಲೋ ಹೇಳುತ್ತಾರಂತೆ.ಆದರೆ ಇಂತಹುದರ ಬಗ್ಗೆ ನಮ್ಮಲ್ಲಿ ಕನಸಿನಲ್ಲಿಯೂ ಎಣಿಸುವಂತಿಲ್ಲ. ನನ್ನ ಒಟ್ಟಾರೆ ವಾದ ಸೆನ್ಸಾರ್ ಇರಲಿ ಅದರಲ್ಲಿ ಕಲಾಮಾಧ್ಯಮದ ಬಗ್ಗೆ ಸೆನ್ಸ್ ಇರೋರು ಇರಲಿ.ನೀವೇನಂತೀರಾ? ಸಿನಿ ದೇವೋಭವ ❤️🙏

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear